ಕನಸಿನ ಮನೆ
ಈ ಮನೆ,ಕಟ್ಟಡ ಕಟ್ಟುವ ಮೂಲ ಕ್ರಿಯೆಗಳು ಶುರುವಾಗುವುದು ಸರಿಯಾದ ದಿಕ್ಕುಗಳನ್ನು ಪ್ರತಿನಿಧಿಸುವ ಭೂಮಿಯ ಆಯ್ಕೆಯಿಂದ. ಇಲ್ಲಿ ಒಂದು ತರ್ಕಕ್ಕೆ ಯೋಗ್ಯವಾದ ವಿಷಯವಿದೆ. ಅದೇನೆಂದರೆ ಸರಿಯಾದ ದಿಕ್ಕುಗಳನ್ನು ಪ್ರತಿನಿಧಿಸುವ ಎಲ್ಲಾ ಭೂಮಿಯೂ ಮನೆ,ಕಟ್ಟಡ ಕಟ್ಟಲು ಯೊಗ್ಯವಿರುತ್ತದೆಯೇ? ಇದಕ್ಕೆ ಉತ್ತರ ಯೋಗ್ಯ ಇರುವುದಿಲ್ಲ ಎನ್ನುವುದೇ ಆಗಿರುತ್ತದೆ, ಹಾಗಾದರೆ ಈ ಭೂಮಿಯ ಆಯ್ಕೆಮಾಡುವಾಗ ಇನ್ನೂ ಯಾವ ಯಾವ ವಿಷಯವನ್ನು ಗಮನದಲ್ಲಿಟ್ಟು ಪರೀಕ್ಷಿಸಿ ಆರಿಸಿಕೊಳ್ಳಬೇಕಾಗುತ್ತದೆ? ಇಲ್ಲಿ ನಾವು ಎರಡು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ಆಯ್ಕೆ ಮಾಡುತ್ತಿರುವ ಭೂಮಿ ಯಾವಕಾರಣಕ್ಕಾಗಿ, ನಿಮ್ಮ ವಾಸಸ್ಥಾನವಾದ ಮನೆ ನಿರ್ಮಾಣಕ್ಕಾಗಿಯೋ?, ಅಥವಾ ಮಳಿಗೆ,ಶಾಲೆ,ಕುಟೀರ,ಕಾರ್ಖಾನೆ ಇವುಗಳ ನಿರ್ಮಾಣಕ್ಕಾಗಿಯೋ? ಈ ಮನೆ ಕಟ್ಟುವ ಜಾಗದ ಆಯ್ಕೆಗೂ ಉಳಿದವುಗಳನ್ನು ಕಟ್ಟುವ ಜಾಗದ ಆಯ್ಕೆಗೂ ಅಜಗಜಾಂತರವಿದೆ. ಈ ಮಳಿಗೆ,ಶಾಲೆ,ಕುಟೀರ,ಕಾರ್ಖಾನೆ ಇವುಗಳನ್ನು ಎಲ್ಲೆಂದರಲ್ಲಿ ಕಟ್ಟಲು ಕೆಲವಕ್ಕೆ ಅವಕಾಶವಿಲ್ಲವಾದರೆ ಇನ್ನು ಕೆಲವಕ್ಕೆ ಏಳಿಗೆ ಕಡಿಮೆ, ಮನೆ ನಿಮ್ಮ ನಿರಂತರ ವಾಸಸ್ತಾನ, ಉಳಿದವುಗಳಲ್ಲಿ ನಿರಂತರ ವಾಸ ಕಡಿಮೆ. ಆದರೆ ಮನೆ ನಿರ್ಮಾಣ ಮಾಡುವ ಜಾಗದ ಆಯ್ಕೆಯಲ್ಲಿ ಹಾಗಾಗುವುದಿಲ್ಲ. ಮನೆ ನಿರ್ಮಾಣ ಮಾಡಲು ಆರಿಸುವ ಜಾಗದ ಪರಿಸರದಲ್ಲಿ ನಿರಂತರ ವಾಸಮಾಡಲು ಯೋಗ್ಯವಾದ ವಾತಾವರಣ ಇರಬೇಕು. ಪರಿಸರ ಶಾಂತವಾಗಿದ್ದು ಶುದ್ದ ಗಾಳಿ ಬೀಸುತ್ತಿರಬೇಕು. ಎಲ್ಲಾ ಮೂಲಸೌಕರ್ಯಗಳೂ ದೊರಕುವಂತಿರಬೇಕು.ಮನೆ ಕಟ್ಟುವ ಜಾಗದ ಆಸುಪಾಸಿನ ಪರಿಸರ ನಿಮ್ಮ ಜೀವನ ಶೈಲಿಗೆ ಹೊಂದಿಕೊಳ್ಳುವಂತಿರಬೇಕು,ಜೀವಜಲಕ್ಕೆ ಅವಲಂಬಿಸಿರದೆ ನಿಮ್ಮದೇ ಆಯ್ಕೆಯ ಜಾಗದಲ್ಲಿ ದೊರಕುವಂತಿದ್ದರೆ ತುಂಬಾ ಉತ್ತಮ.ಹಚ್ಚ ಹಸಿರಿನಿಂದ ತುಂಬಿದ ಆಸುಪಾಸಿನ ವಾತಾವರಣದ ಜಾಗ ವಾಸದ ಯೋಗ್ಯತೆಯನ್ನ ದ್ವಿಗುಣಗೊಳಿಸುತ್ತದೆ.ಪೂರ್ವದ ಬಿಸಿಲು ಉತ್ತರದ ಗಾಳಿ ದೊರಕುವಂತಿದ್ದರೆ ಆ ಜಾಗ ಸಂಪನ್ನತೆಯಿಂದ ಕೂಡಿರುತ್ತದೆ.ಕರ್ಕಶ ಶಬ್ಧ ನಿರಂತರವಾಗಿ ಕೇಳಿಸುವ ಜಾಗ ಮತ್ತು ನಿರಂತರವಾಗಿ ಭೂಮಿ ಅದುರುತ್ತಿರುವ ಜಾಗ ಮನೆ ಕಟ್ಟಲು ಯೋಗ್ಯವಲ್ಲ.ಮನೆಕಟ್ಟುವ ಜಾಗದ ಆಸಪಾಸಿನಲ್ಲಿ ಹೆಚ್ಚಿನ ವಿಧ್ಯತ್ ಶಕ್ತಿ ಸಂಚಾರದ ಲೈನ್ ಹಾದು ಹೋಗಿರಬಾರದು.ಯಾವುದೇ ಕಾರಣಕ್ಕೂ ಮೊಬೈಲ್ ಟವರ್ ನೀವು ಆರಿಸುವ ಜಾಗದ ಆಸುಪಾಸಿನಲ್ಲೂ ಇರಲೇ ಬಾರದು.

ಕಾಮೆಂಟ್‌ಗಳು